ಟ್ರೈಟ್ಯೂಬರ್‍ಕ್ಯುಲೇಟ
	ನಿರ್ನಾಮವಾಗಿರುವ ಕೀಟಾಹಾರಿ ಸಸ್ತನಿಗಳ ಗಣ. ಪ್ಯಾಂಟೊತೀರಿಯ ಪರ್ಯಾಯನಾಮ. ಯೂರೋಪು ಮತ್ತು ಅಮೆರಿಕದ ಜುರಾಸಿಕ್ ಶಿಲೆಗಳಲ್ಲಿ ಈ ಸಸ್ತನಿಗಳ ಕೆಳದವಡೆಯ ಫಾಸಿಲುಗಳು ದೊರಕಿವೆ. ಕೆಳದವಡೆಯ ರಚನಾಕ್ರಮದ ಆಧಾರದ ಮೇಲೆ, ಈ ಗುಂಪು ಆಧುನಿಕ ಸಸ್ತನಿಗಳ ಉದ್ಭವಕ್ಕೆ ಕಾರಣವಾದ ಗುಂಪಿಗೆ ನೇರವಾದ ಸಂಬಂಧ ಹೊಂದಿತ್ತೆಂದು ಹೇಳುವರು. ಈ ಗಣದ ಉದಾಹರಣೆಯಾದ ಆಂಫಿತೀರಿಯಮಿನ ಕೆಳದವಡೆಯ ಫಾಸಿಲಿನ ಪ್ರತಿಭಾಗದಲ್ಲಿ ನಾಲ್ಕು ಬಾಚಿಹಲ್ಲುಗಳು, ಒಂದು ಕೋರೆಹಲ್ಲು, ನಾಲ್ಕುಮುಂದವಡೆ ಹುಲ್ಲುಗಳು ಮತ್ತು ಏಳು ದವಡೆಹಲ್ಲುಗಳು ಇವೆ. ಮೇಲು ದವಡೆಯ ದವಡೆಹಲ್ಲುಗಳ ಆಕಾರ ತ್ರಿಕೋನದಂತೆ. ಇದರಲ್ಲಿ ಪ್ರಧಾನವಾದ ಒಂದು ಒಳಕೋಡು. ಒಂದು ದೊಡ್ಡ ಹೊರಕೋಡು ಮತ್ತು ಹಲವಾರು ಸಣ್ಣ ಕೋಡುಗಳು ಇವೆ. ಕೆಳದವಡೆಯ ದವಡೆಹಲ್ಲುಗಳಲ್ಲಿ ಅಸಮ ತ್ರಿಕೋನಾಕಾರದಲ್ಲಿ ಅಳವಡಿಕೆಯಾದ ಮೂರು ಪ್ರಧಾನ ಕೋಡುಗಳು, ಅವುಗಳ ಹಿಂದೆ ಟಾಲೊನಿಡ್ ಅಥವಾ ಹಿಮ್ಮಡಿ ಎಂಬ ಪ್ರದೇಶ ಮತ್ತು ಇದರ ಮೇಲೆ ಮತ್ತೊಂದು ಕೋಡು ಉಂಟು. 
(ಎಸ್.ಆರ್.ಕೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ